ಶ್ರೀಮಠದ ಶೈಕ್ಷಣಿಕ ಬೆಳವಣಿಗೆ
೧೯೮೩-೮೪ರಲ್ಲಿ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆ ಹುಟ್ಟುಹಾಕುವುದರೊಂದಿಗೆ ಮೊದಲಿಗೆ ಶ್ರೀ ವಿವೇಕಾನಂದ ಶಿಶುವಿಹಾರ ಹಾಗೂ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಯಿತು. ಪ್ರಾರಂಭವಾದ ಒಂದೆರಡು ವರ್ಷಗಳಲ್ಲಿ ಶಾಲೆಯು ಪ್ರಗತಿಯ ಹಾದಿಯಲ್ಲಿ ಸಾಗುತ್ತಿರಬೇಕಾದರೆ ೧೯೮೬ ಮೇ ೧೨ರಂದು ಹಿರಿಯ ಪೂಜ್ಯರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಲಿಂಗೈಕ್ಯರಾದರು. ಇದರಿಂದಾಗಿ ಮಠದ ಏನೆಲ್ಲ ಜವಾಬ್ದಾರಿಗಳನ್ನು ಸದ್ಯದ ಪೂಜ್ಯರು ವಹಿಸಿಕೊಳ್ಳುತ್ತಾರೆ. ಇವರು ಧರ್ಮ, ಆಧ್ಯಾತ್ಮ, ದಾಸೋಹ ಸೇವೆಗಳೊಂದಿಗೆ ಈ ಸಂಸ್ಥೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದರು. ೧೯೯೦- ೯೧ರಲ್ಲಿ ಹೈಸ್ಕೂಲ್ ತರಗತಿಗಳು ಪ್ರಾರಂಭಗೊಂಡವು. ಅದೇವರ್ಷ ನಾಡಿನ ಬೇರೆ ಬೇರೆ ಕಡೆಗಳಿಂದ ವಿದ್ಯಾರ್ಜನೆಗಾಗಿ ಬರುವ ವಿದ್ಯಾರ್ಥಿಗಳಿಗಾಗಿ ವಸತಿ ನಿಲಯವನ್ನೂ ಆರಂಭಿಸಲಾಯಿತು. ಅಂದು ಕೇವಲ ಐದಾರು ಮಕ್ಕಳಿಂದ ಪ್ರಾರಂಭವಾದ ವಸತಿ ನಿಲಯದಲ್ಲಿಂದು ೨೫೦ಕ್ಕಿಂತಲೂ ಹೆಚ್ಚು ಮಕ್ಕಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
೧೯೯೪-೯೫ರಲ್ಲಿ ಪದವಿಪೂರ್ವ ಮಹಾವಿದ್ಯಾಲಯವನ್ನು ಆರಂಭಿಸಲಾಯಿತು. ಪ್ರಾರಂಭದಲ್ಲಿ ಕಲಾ ವಿಭಾಗವೊಂದನ್ನೇ ಆರಂಭಿಸಲಾಯಿತಾದರೂ ಒಂದೆರಡು ವರ್ಷಗಳ ಬಳಿಕ ವಿಜ್ಞಾನ ವಿಭಾಗವೂ ಪ್ರಾರಂಭಗೊಳ್ಳುತ್ತದೆ. ವಿಜ್ಞಾನ ತರಗತಿಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಪ್ರಯೋಗಾಲಯವೊಂದು ಸಂಸ್ಥೆಯಡಿಯಲ್ಲಿ ನಿರ್ಮಾಣಗೊಂಡಿತು. ಹೀಗೆ ೧೯೮೦ರ ದಶಕದಲ್ಲಿ ಕೇವಲ ಐದಾರು ಮಕ್ಕಳಿಂದ ಸ್ಥಾಪಿತಗೊಂಡ ಈ ಸಂಸ್ಥೆಯಲ್ಲಿಂದು ೧೫೦೦ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರೆ ಈ ಸಂಸ್ಥೆಯ ಬೆಳವಣಿಗೆಯನ್ನು ಅರಿತುಕೊಳ್ಳಬಹುದು.
ಶ್ರೀ ಸಿದ್ಧಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯ ಅಡಿಯಲ್ಲಿ ಪಂಚಾಕ್ಷರಿ ಸಂಗೀತ ಪಾಠಶಾಲೆ, ಅಕ್ಕಮಹಾದೇವಿ ಬೆರಳಚ್ಚು ಕೇಂದ್ರ, ಗಣಕಯಂತ್ರ ವಿಭಾಗ, ಕುಮಾರೇಶ್ವರ ಸಂಸ್ಕೃತ ಪಾಠಶಾಲೆ ಇತ್ಯಾದಿ ಹಲವು ವಿಭಾಗಗಳನ್ನು ಆರಂಭಿಸುವುದರೊಂದಿಗೆ ಮಕ್ಕಳಿಗೆ ಸಾಮಾನ್ಯ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದ ತಿಳುವಳಿಕೆ ನೀಡುವಲ್ಲಿ ಪೂಜ್ಯರು ವಹಿಸಿದ ಪಾತ್ರವನ್ನು ಯಾರೂ ಮರೆಯುವಂತಿಲ್ಲ. ಇಂದು ಈ ಸಂಸ್ಥೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಜನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಶ್ರೀಮಠದ ಶ್ರೇಯಸ್ಸಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಪ್ರತಿವರ್ಷ ಡಿಸೆಂಬರ-ಜನೆವರಿ ತಿಂಗಳಲ್ಲಿ ಶಾಲಾಮಕ್ಕೆ 4/6 ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಾಲಾ ವಾರ್ಷಿಕೋತ್ಸವವು ಅತ್ಯಂತ ಸುವ್ಯವಸ್ಥಿತವಾಗಿ ನಡೆಯುತ್ತದೆ. ಅಲ್ಲದೇ ರಾಜ್ಯ ಹಾಗೂ ರಾಷ್ಟ್ರೀಯ ದಿನಗಳಂದು ವಿಶೇಷ ಕಾರ್ಯಕ್ರಮಗಳು ಜರುಗುತ್ತವೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿದ್ವಾಂಸರನ್ನು ಸನ್ಮಾನಿಸಿ ಗೌರವಿಸುವ ಸಂಪ್ರದಾಯವನ್ನು ಶ್ರೀಮಠವು ಕಳೆದೆರಡು ದಶಕಗಳಿಂದ ನಡೆಸಿಕೊಂಡು ಬರುತ್ತಿದೆ.
೧-೩೦ ಗಂಟೆಗೆ ಊಟ, ೨-೦೦ ರಿಂದ ಮತ್ತೆ ಶಾಲಾವಧಿ ಸಾಯಂಕಾಲ ೫ ಗಂಟೆಗೆ ಆಟ-ಪಾಠಗಳು, ೬ ಗಂಟೆಗೆ ವಿಶೇಷ ಅಧ್ಯಯನ, ಸಾಯಂಕಾಲ ೮ ಗಂಟೆಗೆ ಪೂಜ್ಯರೊಂದಿಗೆ ಪ್ರಾರ್ಥನೆಯಲ್ಲಿ ತೊಡಗುವುದು. ಪ್ರಾರ್ಥನೆಯಾದ ಮೇಲೆ ಊಟ; ಆಮೇಲೆ ಮಲಗುವುದು. ಇದು ವಸತಿ ನಿಯಲದ ವಿದ್ಯಾರ್ಥಿಗಳ ದಿನನಿತ್ಯದ ಕಾಯಕ. ಇಲ್ಲಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಒಂದೆಡೆಯೇ ಇರುವುದರಿಂದ ಇದೊಂದು ನಿವಾಸಸಹಿತ ವಿದ್ಯಾಕೇಂದ್ರವಾಗಿದೆ. ಒಂದರ್ಥದಲ್ಲಿ ಈ ಸಂಸ್ಥೆ ಪ್ರಾಚೀನ ಕಾಲದ ಗುರುಕುಲ ಶಿಕ್ಷಣದ ಪದ್ಧತಿಯನ್ನು ನೆನಪಿಗೆ ತರುತ್ತದೆ. ಶ್ರೀಮಠದ ಸಾಹಿತ್ಯಕ ಚಟುವಟಿಕೆ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ೧೯೯೦ರ ದಶಕದಲ್ಲಿ ಶ್ರೀಮಠದಲ್ಲಿ ಸಂಶೋಧನ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವುದರೊಂದಿಗೆ ಸಂಶೋಧನೆಗೊಂದು ಹೊಸ ಆಯಾಮವನ್ನೇ ಸೃಷ್ಟಿಸಿದರು. ಈ ಒಂದು ನಿಟ್ಟಿನಲ್ಲಿ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸುವುದರೊಂದಿಗೆ ಸಾಹಿತ್ಯ ವಲಯದಲ್ಲೂ ಶ್ರೀಮಠದ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸಿದ್ದಾರೆ. ಗೂಳೂರ ಸಿದ್ಧವೀರಣ್‌ಡೆಯರು ಸಂಗ್ರಹಿಸಿದ ಪ್ರಭುದೇವರ ಶೂನ್ಯ ಸಂಪಾದನೆ.೫ ಶೂನ್ಯ ಸಂಪಾದನೆಯ ಪರಾಮರ್ಶೆ, ಪರಾಮರ್ಶೆಯ ವಿಮರ್ಶೆ, ಚಿಂತನಾಂಜಲಿ, Man the devine, ಪ್ರೇಮಿಲಿ ಬಬ್ರುವಾಹನ ಮೊದಲಾದ ಸಾಹಿತ್ಯ ಗ್ರಂಥಗಳು ರಾವೂರಿನ ಶ್ರೀ ಸಿದ್ಧಲಿಂಗೇಶ್ವರ ಮಠ ಹಾಗೂ ಆದೋನಿಯ ಕಲ್ಲುಮಠದ ಪ್ರಕಾಶನದ ಅಡಿಯಲ್ಲಿ ಪ್ರಕಟಗೊಂಡಿವೆ. ಇದಲ್ಲದೆ ಶ್ರೀ ರೇವಣಸಿದ್ದಪ್ಪ ಭೈರಾಮಡಗಿ ಅವರ ಸಹಾಯದಿಂದ 'ಶ್ರೀ ಸಿದ್ಧಲಿಂಗೇಶ್ವರ ಭಕ್ತಿಗೀತೆ' ಧ್ವನಿಸುರುಳಿಯೂ ಹೊರಬಂದಿದೆ.
ಶ್ರೀಮಠದ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು
ಸುಮಾರು ಮೂರು ಶತಮಾನಗಳಷ್ಟು ಪುರಾತನವಾದ ಶ್ರೀಮಠದ ವಾಸ್ತುರಚನೆಯಲ್ಲಿ ಪ್ರಮುಖವಾಗಿ ಜಾಲಂಧ್ರಗಳು, ಕಟಾಂಜನ ಹಾಗೂ ಕಂಬಗಳು ವಿಶಿಷ್ಟ ಕುಸುರಿ ಕೆತ್ತನೆಯಿಂದ ಕೂಡಿವೆ. ಸಂಪೂರ್ಣ ಜೀರ್ಣಗೊಂಡಿರುವ ಮಠದ ಕೆಲವೊಂದು ಭಾಗಗಳನ್ನು ನವೀಕರಿಸಲಾಗಿದೆ. ಆನಂತರದಲ್ಲಿ ನಿರ್ಮಿಸಲಾಗಿದ್ದೆಂದು ಹೇಳುವ ಈ ಮಠದ ಮುಂಭಾಗದಲ್ಲಿರುವ ಗದ್ದುಗೆಗಳಲ್ಲದೆ ಇತರ ವಾಸ್ತುರಚನೆಗಳು ಪರ್ಷಿಯನ್ ವಾಸ್ತುಶೈಲಿಯನ್ನು ಹೋಲುತ್ತವೆ. ಹಾಗಾಗಿ ಇದೊಂದು ಸರ್ವಧರ್ಮ ಸಮನ್ವಯಗಳ ಪ್ರತೀಕವಾಗಿದೆ. ಶ್ರೀಮಠದಲ್ಲಿ ಪ್ರತೀವರ್ಷ ಶ್ರಾವಣಮಾಸದಲ್ಲಿ ಪುರಾಣ ಪ್ರವಚನಗಳೊಂದಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಚೈತ್ರಬಹುಳ ಅಷ್ಟಮಿಗೆ ಪಲ್ಲಕ್ಕಿ ಉತ್ಸವ, ಚೈತ್ರಬಹುಳ ನವಮಿಗೆ ನಂದಿಕೋಲು ಕುಣಿತ, ಪುರವಂತರಾಟ, ಡೊಳ್ಳುಕುಣಿತಗಳೊಂದಿಗೆ ರಥೋತ್ಸವವು ಬಹು ವಿಜೃಂಭಣೆಯಿಂದ ಜರುಗುತ್ತದೆ. ಜಾತ್ರೆಯ ಪ್ರಯುಕ್ತ ಗ್ರಾಮೀಣ ಪ್ರದರ್ಶನ ಕಲೆಗಳಾದ ಜಾನುವಾರುಗಳ ಪ್ರದರ್ಶನ, ಕುಸ್ತಿಪಂದ್ಯ, ಡೊಳ್ಳುಕುಣಿತ, ಗೀಗೀಪದ ಹೀಗೆ ಹತ್ತು ಹಲವು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸೂಕ್ತ ಬಹುಮಾನಗಳೂ ಸಹ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ನಾಡು-ನುಡಿಗೆ ವಿಶಿಷ್ಟ ಸೇವೆ ಸಲ್ಲಿಸಿದ ಕಲಾವಿದರಿಗೆ, ಸಾಹಿತಿಗಳಿಗೆ ಸನ್ಮಾನಿಸಿ ಗೌರವಿಸುವುದು ಶ್ರೀಮಠದ ಪರಂಪರೆಯಾಗಿದೆ.
ಒಟ್ಟಾರೆ ಶ್ರೀಮಠದ ಶೈಕ್ಷಣಿಕ ಶ್ರೇಯೋಭಿವೃದ್ಧಿಯಲ್ಲಿ ಪೂಜ್ಯರಲ್ಲದೇ ಊರಿನ ಹಿರಿಯರ ಶ್ರಮವೂ ಅಡಗಿದೆ ಎಂದು ಹೇಳಿದರೆ ತಪ್ಪಾಗಲಾರದು. ೧೯೯೯ ಮಹತ್ವದ ವರ್ಷ ೧೯೯೯ರ ಎಪ್ರಿಲ್ ತಿಂಗಳಲ್ಲಿ ಸದ್ಯದ ಪೂಜ್ಯರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪಟ್ಟಾಧಿಕಾರ ಮಹೋತ್ಸವವು ವಿಧಿವತ್ತಾಗಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಸಕಲ ಜನಾಂಗದವರು ಸೇರಿ ನಡೆಸಿದ ಈ ಮಹೋತ್ಸವ ಈ ಭಾಗದ ಜನರ ಪಾಲಿಗೆ ಎಂದೂ ಮರೆಯದ ಕ್ಷಣವೆಂದೇ ಹೇಳಬಹುದು. ಈ ಮಹೋತ್ಸವದಲ್ಲಿ ಕರ್ನಾಟಕ ರಾಜ್ಯದ ಆಗಿನ ಮುಖ್ಯಮಂತ್ರಿಗಳಾಗಿದ್ದ ಸನ್ಮಾನ್ಯ ಶ್ರೀ ಜೆ.ಹೆಚ್. ಪಟೇಲ್ ಅವರನ್ನು ಒಳಗೊಂಡಂತೆ ನಾಡಿನ ಅನೇಕ ಗಣ್ಯರು, ಹೆಸರಾಂತ ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ 'ಅಲ್ಲಮ ಪ್ರಭುದೇವರ ಶೂನ್ಯ ಸಂಪಾದನೆ' ಗ್ರಂಥದ ಬಿಡುಗಡೆ, ಪ್ರಸಾದ ನಿಲಯದ ಉದ್ಘಾಟನೆ, ನೂತನ ರಥದ ಉದ್ಘಾಟನೆ ಮುಂತಾದ ಕಾರ್ಯಕ್ರಮಗಳು ಜರುಗಿದವು. ಸುಮಾರು ಒಂದು ತಿಂಗಳಕಾಲ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಈ ಪಟ್ಟಾಧಿಕಾರ ಮಹೋತ್ಸವ ಸವಿನೆನಪನ್ನು ನಿಜವಾಗಲೂ ಈ ಭಾಗದ ಜನರು ಎಂದೂ ಮರೆಯಲಾರರು. ಟಿಪ್ಪಣಿಗಳು ಪ್ರಾಚೀನ ಕಾಲದಲ್ಲಿ ಅಗ್ರಹಾರಗಳು, ಬ್ರಹ್ಮಪುರಿಗಳು, ದೇವಾಲಯಗಳಂತೆ ಮಠಗಳೂ ಶಿಕ್ಷಣ ಕೇಂದ್ರಗಳಾಗಿದ್ದವು. ಪ್ರಾಚೀನ ಕರ್ನಾಟಕದ ಬಳ್ಳಿಗಾವೆ, ನಾಗಾವಿ, ಸಾಲೋಟಗಿ ಮುಂತಾದ ಸ್ಥಳಗಳಲ್ಲಿ ದೊರಕಿರುವ ಶಾಸನಾಧಾರಗಳಿಂದ ಈ ವಿಷಯ ತಿಳಿದುಬರುತ್ತದೆ. ಈಗಲೂ ಈ ಸಮಾಧಿಗಳನ್ನು ಮಠದ ಸುತ್ತಮುತ್ತಲಿನಲ್ಲಿರುವುದನ್ನು ನಾವು ನೋಡಬಹುದಾಗಿದೆ.